ಗ್ರೀಕ್ ವಿಮರ್ಶೆ	 -

ಪ್ರಾಚೀನ ಗ್ರೀಸಿನಲ್ಲಿ ಅಧಿಕೃತ ಕಾವ್ಯವಿಮರ್ಶೆ ಕಾಣಸಿಗುವುದು ಸೃಜನಾತ್ಮಕ ಕಾವ್ಯಕೃಷಿ ಆದ ಹಲವಾರು ಶತಮಾನಗಳ ಅನಂತರ. ಎಂದರೆ ಕ್ರಿ.ಪೂ. ಸು. 5ನೆಯ ಶತಮಾನದ ಕೊನೆಯ ಭಾಗದಲ್ಲಿ. ಆರಿಸ್ಟಾಫನೀಸ್ ಮುಂತಾದ ಹಳೆಯ ಹರ್ಷನಾಟಕಕಾರರೂ ಪ್ಲೇಟೊ ಮತ್ತು ಸಾಕ್ರಟೀಸರೂ ತತ್ತ್ವ ದೃಷ್ಟಿಯಿಂದಲೂ ಉದ್ದೇಶಪೂರ್ವಕವಾಗಿಯೂ ತಮ್ಮ ಕಾಲದ ಮತ್ತು ಹಿಂದಣ ಕವಿಗಳನ್ನು ಪರಿಶೀಲಿಸತೊಡಗಿದುದೇ ವಿಮರ್ಶೆಯ ಪ್ರಾರಂಭ. ಅದಕ್ಕೆ ಹಿಂದೆ ಜ್ಞಾನಿಗಳಿಂದಲೊ ಸ್ವತಃ ಕಾವ್ಯಕರ್ತರಿಂದಲೂ ಕಾವ್ಯವನ್ನು ಕುರಿತ ನಾನಾ ಹೇಳಿಕೆಗಳು ಆಗಿಬಂದುವು. ಕಾವ್ಯದ ಧ್ಯೇಯ ಯಾವುದು, ಕಾವ್ಯ ಹೇಗಿರಬೇಕು, ಹೇಗಿರಕೂಡದು, ಇತ್ಯಾದಿ ನೀತಿಸೂತ್ರ ಅವರಿಂದ ಘೋಷಿತವಾಯಿತು. ಭವ್ಯಕಾವ್ಯ, ಪ್ರಗಾಥ, ರೂಪಕ ಕಾವ್ಯ, ಚರಿತ್ರೆ, ತಾತ್ತ್ವಿಕ ಪ್ರಬಂಧ, ಭಾಷಣಗಳಲ್ಲಿ ಅಂಥ ವಾಕ್ಯಾವಳಿ ಕ್ರಿ.ಪೂ. 8ನೆಯ ಶತಮಾನದಿಂದಲೂ ಕಾಣಬರುತ್ತವೆ. ಜನಜೀವನಕ್ಕೆ ಕಾವ್ಯ ನಿಕಟವೂ ಅತ್ಯಗತ್ಯವೂ ಆಗಿದ್ದಿತಾಗಿ ಜೀವನದ ಪ್ರಸ್ತಾಪ ಚಿಂತನೆಗೆ ಬಂದಾಗಲೆಲ್ಲ ಕಾವ್ಯದ ಪ್ರಸ್ತಾಪ ತಾನಾಗಿಯೇ ಉಕ್ಕಿ ಬರುತ್ತಿದ್ದುದು ನ್ಯಾಯವೆ. ಆದರೂ ಹೋಮರ್, ಪಿಂಡರ್, ಸಿಮೊನಿಡೀಸ್, ಹೆರಾಕ್ಲಿಟಸ್, ತುಸಿಡಿಡೀಸ್ ಮೊದಲಾದವರು ಕವಿಗಳು, ವಿಚಾರ ಸಾಹಿತಿಗಳು, ಚಾರಿತ್ರಕರೇ ಹೊರತು ವಿಮರ್ಶಕರಲ್ಲ. ಅವರೂ ಇತರರೂ ವಿಮರ್ಶೆಗೆ ತಳಹದಿ ಹಾಕಿದರೆಂದು ಧಾರಾಳವಾಗಿ ಹೇಳಬಹುದು. ಗ್ರೀಕರಿಗೆ ಕಾವ್ಯವೆಂಬುದು ಕೇವಲ ಒಂದು ಆಹ್ಲಾದಕಾರಕ ವಾಗ್‍ವ್ಯವಸಾಯವಾಗಿರಲಿಲ್ಲ. ಅದರಿಂದ ನೀತಿಬೋಧೆ ಆಗಲೇ ಬೇಕೆಂದು ಅವರ ಆಕಾಂಕ್ಷೆ. ಆರಿಸ್ಟಾಟಲ್ ಪ್ರವೇಶಮಾಡಿ ಕಾವ್ಯಕ್ಕೆ ಪ್ರತ್ಯೇಕ ಅಸ್ತಿತ್ವವೂ ಅದರದೇ ಆದ ಪರಿಣಾಮವೂ ಉಂಟೆಂದು ಸ್ಥಾಪಿಸಲು ಪ್ರಯತ್ನಿಸಿದ. ಆದರೆ ಅವನಲ್ಲಿಯೂ ಕಾವ್ಯಕಲಾಪದಿಂದ ಜನ ಒಳ್ಳೆಯತನ ಕಲಿಯತಕ್ಕದ್ದು ಎಂಬ ನಿಯಮದ ಕಿಂಚಿದ್ವಾಸನೆ ಇದ್ದೇ ಇದೆ.

  	ಕಾವ್ಯಸ್ಫೂರ್ತಿಯ ವಿಚಾರವಾಗಿಯೂ ಭಾಷಣವಿದ್ಯೆಯ ಎರಡು ಬಗೆಗಳ ಮೇಲೂ ಹೋಮರ್ ಗಮನಾರ್ಹವಾದ ಮಾತುಗಳನ್ನು ಆಡಿದ್ದಾನೆ. ಕಾವ್ಯ ರಚನೆಯಲ್ಲಿ ಆವೇಶದ ಭಾಗ ಎಷ್ಟು, ತಂತ್ರ ನಿಯಂತ್ರಣದ ಭಾಗ ಎಷ್ಟು ಎಂಬ ಸಮಸ್ಯೆಯನ್ನು ಪಿಂಡರ್ ಪುನಃ ಯೋಚನಾಪರರ ಮುಂದಿಟ್ಟ. ಕೊರಿನ್ನಾ ಎಂಬ ಕವಯಿತ್ರಿ ಪುರಾಣ ಕಥಾವಳಿಯನ್ನು ಹೆಚ್ಚಾಗಿ ಉಪಯೋಗಿಸದಿದ್ದರೆ ಲೇಸು ಎಂದು ಪಿಂಡರನಿಗೆ ಉಪದೇಶಿಸಿದಳು. ಸಿಮೊನಿಡೀಸ್ ಚಿತ್ರಣವನ್ನು ಮಾತಾಡದ ಕಾವ್ಯವೆಂದೂ ಕಾವ್ಯವನ್ನು ಮಾತಾಡುವ ಚಿತ್ರಣವೆಂದೂ ಕರೆದ. ಹೆರಾಕ್ಲಿಟೀಸ್ ಕ್ಸೀನೊಫೇನೀಸ್ ಮೊದಲಾದವರು ಬಿಡಿ ಕವಿಗಳನ್ನು ಕುರಿತು ಟೀಕೆ ಮಾಡಿದರು. ತುಸಿಡಿಡೀಸ್ ಕಾವ್ಯದ ಪ್ರಯೋಜನ ಆಹ್ಲಾದವೊ ಶೀಲಪ್ರಚೋದನೆಯೊ ಎಂಬ ಪ್ರಶ್ನೆಯನ್ನು ಒತ್ತಿ ಒತ್ತಿ ಕೇಳಿದ. ಆರಿಸ್ಟಾಟಲನ ತರುವಾಯವೂ ಲೇಖಕರು ತಮ್ಮ ಕೃತಿ ಯಾವ ಪ್ರಕಾರದ್ದೇ ಆಗಲಿ ಅದರಲ್ಲಿ ಇಂಥ ವಿಚಾರವಾಣಿಗೆ ಉತ್ಸಾಹದಿಂದ ಅವಕಾಶವೀಯುತ್ತಿದ್ದರು.

  	ಹೋಮರ್ ಹೇಸಿಯಡ್ಡರು ಗ್ರೀಕ್ ಸಂಸ್ಕøತಿಗೆ ಮೂಲಾಧಾರ, ಮುಖ್ಯಾಧಾರ. ದೇವತೆಗಳಿಗೆ ಅವರಿಬ್ಬರೂ 
ಮಾನವತ್ವ ಆರೋಪಿಸಿ ದೈವದ್ರೋಹಿಗಳಾದರೆಂದು ಕೆಲವು ದಾರ್ಶನಿಕರು ಹಳಿದದ್ದನ್ನು ಸಹಿಸಲಾರದೆ ಅನಾಕ್ಸಿಮಾಂಡರ್, ಸ್ಟೆಸಿಂಬ್ರೋಟಸ್, ಗ್ಲೌಕಸ್ ಮೊದಲಾದ ಕವಿಪ್ರೇಮಿಗಳು ಅವರ ಕಾವ್ಯವನ್ನು ಅನ್ಯಾರ್ಥ ಕಾವ್ಯವಾಗಿ ತೆಗೆದುಕೊಳ್ಳಬೇಕೆಂದು ವಾದಿಸಿದರು. ಅಪಾಲೊ ವಧೆಕಾರ, ಅವನ ಶರಜಾಲ ಕೊಲ್ಲುವ ಸಾಧನ-ಎಂದು ಭ್ರಾಂತಿಪಡುವುದು ತಪ್ಪು, ಅಪಾಲೊ ಸೂರ್ಯದೇವ, ಅವನು ಕಳಿಸುವುದು ರಶ್ಮಿಸಮೂಹ ಎಂದು ಅರ್ಥ ಮಾಡಿಕೊಳ್ಳಬೇಕು-ಈ ರೀತಿ ಕೆಲವರಿಂದ ಕವಿಸಮರ್ಥನೆ ನಡೆಯಿತು. ಇನ್ನೂ ಕೆಲವರಿಗೆ ಅನ್ಯಾರ್ಥಕ್ಕೂ ಹಿಂದೆ ಅಧ್ಯಾತ್ಮಿಕಾರ್ಥ ಗೂಢವಾಗಿದೆಯೆಂದೇ ನಂಬಿಕೆ. ಒಪ್ಪಲಾಗದ ಅಭಿಪ್ರಾಯವಾದರೂ ಇವು ಪ್ರಕಟಿಸುವ ಕಾವ್ಯಾದರವನ್ನು ಮೆಚ್ಚಬೇಕು ; ಕಾವ್ಯಾದರ ಸಾಕ್ಷಾತ್ ವಿಮರ್ಶೆಯಲ್ಲದಿದ್ದರೂ ವಿಮರ್ಶೆಗೊಂದು ಸೋಪಾನ. 

  	ಹಳೆಯ ಹರ್ಷನಾಟಕ ಜೀವನದ ವಿಡಂಬನಾತ್ಮಕ ವಿಮರ್ಶೆಯಲ್ಲದೆ ಮತ್ತೇನೂ ಆಗಿರಲಿಲ್ಲ. ಆ ನಾಟಕಕಾರರು ಪ್ರಮುಖವಾಗಿ ರಾಜಕೀಯ ಮುಂದಾಳುಗಳನ್ನು ಅವಹೇಳನ ಗೈಯುವ ಇಚ್ಚೆಯುಳ್ಳವರಾದರೂ ಸಾಕ್ರಟೀಸ್ ಮೊದಲಾದ ತತ್ತ್ವಜ್ಞರೂ ಯುರಿಪಿಡೀಸ್ ಈಸ್ಕಿಲಸ್ ಮೊದಲಾದ ಗಂಭೀರನಾಟಕಕಾರರೂ ಅವರ ಲಕ್ಷ್ಯದಿಂದ ಹೊರಗಾಗಲಿಲ್ಲ. ಆರಿಸ್ಟಾಫನೀಸ್ ನಡೆಸಿರುವ ಹೋಲಿಕೆಯೂ ಸಾರಿರುವ ತೀರ್ಮಾನವೂ ಅತ್ಯುತ್ಕøಷ್ಟ ವಿಮರ್ಶೆ. ಅವನ ಒಲವು ಹೆಚ್ಚಾಗಿ ಈಸ್ಕಿಲಸನ ಪರವಾಗಿ ಇದ್ದರೂ ಆ ಕವಿಯ ದೋಷಗಳಿಗೆ ಅವನು ಕಣ್ಮುಚ್ಚಲಿಲ್ಲ; ವಿರೋಧಿ ಯುರಿಪಿಡೀಸನ ಸುಶ್ರಾವ್ಯ ಕವಿತ್ವಕ್ಕೆ ಮಾನ್ಯತೆ ಇದ್ದೇ ಇತ್ತು. ಕಾವ್ಯಪಂಕ್ತಿಗಳ ತೂಕ ಅಳತೆ ಮುಂತಾದ ವಿಚಾರ ವಿಮರ್ಶೆಯ ವೈಪರೀತ್ಯವನ್ನೂ ಆತ ಪರಿಹಾಸ ಮಾಡಿದ. ಎಲ್ಲಕ್ಕೂ ಮೇಲಾಗಿ ಮಹೋನ್ನತ ಕವಿ ಇಲ್ಲದಿದ್ದರೆ ಮನುಷ್ಯ ಸಮಾಜ ಮೆರೆಯಲಾರದು ಎಂಬ ಅವನ ಅಭಿಮತ ಸ್ವಾಗತಾರ್ಹ, ಮನನೀಯ, ಪ್ರಭಾವಯುಕ್ತ.

  	ಪ್ಲೇಟೊವಿನ ದೃಷ್ಟಿಗೆ ಕವಿಯ ನಿರೂಪಣೆ ಆದರ್ಶ ಸತ್ಯದಿಂದ ಎರಡು ಮಜಲು ಈಚೆ, ಆದ್ದರಿಂದ ಅದು ಸುಳ್ಳು. ಅಲ್ಲದೆ ಶ್ರೋತೃಗಳೂ ನೋಟಕರೂ ಭಾವಾತಿರೇಕದ ಆವೇಶದಲ್ಲಿ ತೊಳಲುವಂತೆ ಮಾಡಿ ಅವರನ್ನು ದುರ್ಬಲಗೊಳಿಸುತ್ತಾನೆ, ಕವಿ-ಎಂದು ಭಾಸವಾಯಿತು. ಮಾದರಿ ರಾಷ್ಟ್ರದಲ್ಲಿ ಕವಿವರ್ಗಕ್ಕೆ ಸ್ಥಾನವಿಲ್ಲ ಎಂದೇ ಅವನ ತೀರ್ಪು. ಇದೊಂದು ಮುಖ. ಇನ್ನೊಂದು ಮುಖವೂ ಉಂಟು. ತನಗೆ ರೆಕ್ಕೆಯಿದೆಯೊ ಎಂಬಂತೆ ಕವಿ ಮೇಲುಮೇಲಕ್ಕೆ ಏರಬಲ್ಲ. ತನ್ನ ಗಾನಸದೃಶವೂ ಚಿತ್ತಾಕರ್ಷವೂ ಆದ ಶಾಬ್ದಿಕ ಪ್ರೇರಣೆಯಿಂದ ನಮ್ಮನ್ನು ಮರಳುಗೊಳಿಸಬಲ್ಲ; ಅವನೊಂದು ಪೂಜ್ಯ ವಸ್ತು-ಇದೂ ಪ್ಲೇಟೊವಿನನ ವರ್ಣನೆಯೆ. ಅವನ ತಪ್ಪು ಅರ್ಥಗಳನ್ನು ಚಚಿಸುವುದೇ ವಿಮರ್ಶೆಗೆ ಉಪಯುಕ್ತವಾದ ಕೆಲಸವೆಂದು ಲೋಕದ ಅಭಿಪ್ರಾಯ. ಹಾಗೂ ಆರಿಸ್ಟಾಟಲನನ್ನು ಕೆರಳಿಸಿ ಕಾವ್ಯಮೀಮಾಂಸೆ ಅವನಿಂದ ಆಗುವಂತೆ ಎಸಗಿದುದೂ ಪ್ಲೇಟೊವಿನ ಪರಮೋಪಕಾರ.

  	ಅರಿಸ್ಟಾಟಲ್ ಕಾವ್ಯಕಲೆ ಮತ್ತು ಭಾಷಣವಿದ್ಯೆ ಚಿಕ್ಕ ಪುಸ್ತಕಗಳಾದರೂ ವಿಮರ್ಶೆಯ ಒಂದು ಗ್ರಂಥಾಲಯಕ್ಕೆ ಸಮ. ಕಾವ್ಯಕ್ಕೂ ಚರಿತ್ರೆಗೂ ಇರುವ ಭೇದ, ಕಾವ್ಯಕ್ಕೂ ತತ್ತ್ವಶಾಸ್ತ್ರಕ್ಕೂ ಇರುವ ಭೇದ, ಅವೆರಡಕ್ಕಿಂತ ಕಾವ್ಯದ ಹಿರಿಮೆಯೇನು, ಕಾವ್ಯದ ಪ್ರಕಾರಗಳಾದ ಭವ್ಯಕಾವ್ಯ ಗಂಭೀರನಾಟಕ ಹರ್ಷನಾಟಕ. ಪ್ರಗಾಥಗಳ ವೈಲಕ್ಷಣ್ಯ ಎಲ್ಲಿದೆ, ಗಂಭೀರನಾಟಕದ ಆರು ಅಂಗಗಳು, ಅವುಗಳಲ್ಲಿ ವಸ್ತುಸಂವಿಧಾನಕ್ಕೆ ಏಕೆ ಪ್ರಾಧಾನ್ಯ, ಉಳಿದ ಅಂಗಗಳ ಸ್ವರೂಪ, ನಾಯಕನ ಗುಣಧರ್ಮ ಎಂತಿರಬೇಕು, ಅವನ ಸ್ಥಿತಿವ್ಯತ್ಯಾಸಕ್ಕೆ ಯಾವುದು ಕಾರಣ, ಗಂಭೀರ ನಾಟಕದಿಂದ ಆಗುವ ಚಿತ್ತಶುದ್ಧ, ಕಾವ್ಯ ಭಾಷೆ, ನೃತ್ಯಮೇಳ ರಂಗಸಜ್ಜುಗಳ ವಿಚಾರ-ಇವು ಕಾವ್ಯಕಲೆ ವಿವರಿಸುವ ವಿಷಯ. ಭಾಷಣ ವಿದ್ಯೆಯನ್ನು ಸ್ವಲ್ಪಮಟ್ಟಿನ ಗದ್ಯಮೀಮಾಂಸೆಯೆಂದೂ ನಿರ್ದೇಶಿಸಬಹುದು. ಕ್ರಿ.ಪೂ.4ನೆಯ ಶತಮಾನದಲ್ಲಿ ವಾಗ್ವಿದ್ಯೆಗೆ ಅತಿಶಯ ಉಪಯೋಗವೂ ಅದರ ಆವಶ್ಯಕತೆಯೂ ಇದ್ದುವು. ಗದ್ಯ ಹೇಗಿದ್ದರೆ ಮನವೊಪ್ಪಿಸುತ್ತದೆ, ಭಾಷಣದ ಅಂಗಗಳಾವುವು ಅವುಗಳ ಯುಕ್ತ ಸಂಯೋಜನೆ, ಅಲಂಕಾರಗಳ ಬಳಕೆ, ಪದಕೋಶ, ಲಯಬದ್ಧ ವಾಕ್ಯಗಳ ರಚನೆ ಮುಂತಾದ ವಿವರಗಳಿಂದ ತುಂಬಿಕೊಂಡಿದೆ- ಆರಿಸ್ಟಾಟಲನ ಗ್ರಂಥ. ಅವನಿಂದ ವಿಮರ್ಶೆ ಸ್ಥಾಪಿತವಾಯಿತು. ಮುಂದೆಯೂ ಅನೇಕ ಶತಮಾನಗಳ ಕಾಲ ಪಾಶ್ಚಾತ್ಯ ಜಗತ್ತಿಗೆಲ್ಲ ಅವನೇ ದಾರಿತೋರುಗನಾದ. ಅವನ ಲೋಪಗಳು ಈಚೆಗೆ ಚೆನ್ನಾಗಿ ಗೊತ್ತಾಗಿರುವುದರಿಂದ ಈಗಲೂ ಅವನ ಗುಣಗಳಿಂದ ಸಮರ್ಪಕ ಲಾಭ ಸಿಕ್ಕುವುದು ನಿಸ್ಸಂದೇಹ.

  	ಗೀತಾತ್ಮಕ ಕಾವ್ಯದ ವಿಷಯವಾಗಿ ಆರಿಸ್ಟಾಟಲ್ ಹೆಚ್ಚೇನೂ ಹೇಳಿಲ್ಲ. ಅದಕ್ಕೆ ಕಾರಣ ವಾಗ್ಮಿಕಲೆಯ ಕೋನದಿಂದ ಕಾವ್ಯಪ್ರಭೇಧಗಳನ್ನೂ ಚರಿತ್ರೆಯನ್ನೂ ಅವನು ವೀಕ್ಷಿಸಿದ್ದು. ಗೀತವಾಗಲಿ ಪ್ರಗಾಥವಾಗಲಿ ಆ ವೀಕ್ಷಣಕ್ಕೆ ಒಳಪಡಬಾರದು. ಕ್ರಿ.ಪೂ. 4ನೆಯ ಶತಮಾನದ ಮತ್ತು ಮುಂದಣ ಶತಮಾನಗಳ ಗ್ರೀಕ್ ವಿಮರ್ಶೆ ಭಾಷಣಕಲೆಯ ಹೊರೆಯನ್ನು ಪೂರ್ತಿ ಕೊಡವಿಕೊಳ್ಳಲಿಲ್ಲ. ಕ್ರಿ.ಶ. ಸು. 2ನೆಯ ಶತಮಾನದ ವಿಮರ್ಶಕಶ್ರೇಷ್ಠ ಲಾಂಜೈನಸ್ ಕೂಡ ಅದನ್ನೆಸಗಿ ಸ್ವತಂತ್ರನಾಗಲು ಅಶಕ್ತನಾದ. ಕ್ರಿ.ಪೂ. 4ನೆಯ ಶತಮಾನದಲ್ಲಿ ವಿಮರ್ಶೆ ನೆರವೇರಿಸಿದ ಕಾರ್ಯದ ವಿವರ ಹೀಗಿದೆ; 1 ಪದ್ಯಶೈಲಿ ಗದ್ಯಶೈಲಿಗಳ ವಗೀಕರಣ, 2 ಕವಿಗಳು ಪ್ರಯೋಗಕ್ಕೆ ತಂದ ಸಾಹಿತ್ಯಪ್ರಭೇಧಗಳ ಆಂಗಿಕ ರಚನೆಯ ತಾತ್ತ್ವಿಕ ವಾಖ್ಯಾನ, 3 ಕವಿಗೆ ನಿಸರ್ಗದತ್ತವಾದ ಶಕ್ತಿ ಮತ್ತು ಕವಿಯ ಅಧ್ಯವಸಾಯಗಳ ಪರಸ್ಪರ ಸಂಬಂಧ, 4 ಸಾಹಿತ್ಯದ ಉದ್ದೇಶದ ಲಕ್ಷಣ ನಿರೂಪಣೆ, 5 ಚರಿತ್ರೆಯ ಆವಶ್ಯಕತೆ.

  	ಗ್ರೀಕ್ ರಾಷ್ಟ್ರಗಳು ಅಲೆಗ್ಸಾಂಡರನ ಸಾರ್ವಭೌಮತ್ವಕ್ಕೆ ಒಳಗಾದ ಮೇಲೆ ಸಾಹಿತ್ಯ ವಾಸ್ತವ ಬಾಳಿನ ಸೊಗಡನ್ನು ಬಿಟ್ಟುಕೊಟ್ಟು ಗ್ರಾಂಥಿಕವೂ ಕೃತಕವೂ ಆಯಿತು. ಸ್ವಾತಂತ್ರ್ಯ ನಾಶಗೊಂಡಾಗ ಸ್ವಂತಿಕೆಗೆ ಪ್ರಚೋದನೆ ಮತ್ತಾವುದರಿಂದಲೂ ಬಾರದು. ಹಳೆಯ ಗಂಭೀರನಾಟಕಗಳ ಪುನರುತ್ಥಾನ ಇಲ್ಲವೆ ಅನುಕರಣ ; ಯುರಿಪಿಡೀಸನ ನಾಟಕಗಳಿಂದ ಸ್ಫೂರ್ತಿ ಪಡೆದು ವಿರಚಿಸಿದ ಹೊಸ ವಿನೋದನಾಟಕ ; ವಿದ್ಯಾಶಾಲೆಗಳಲ್ಲಿ ಅಭ್ಯಾಸಕ್ಕಾಗಿ ಬರೆದ ಭಾಷಣಗಳು- ಇವೇ ಆ ಕಾಲದ ಸಾಹಿತ್ಯ. ಬುದ್ಧಿಚಾತುರ್ಯಕ್ಕೆ ಆಸ್ಪದ ಕೊಡುವ ನಾಟುನುಡಿ ಮಾತ್ರ ಸಮೃದ್ಧವಾಗಿ ಬೆಳೆಯಿತು. ಪಂಡಿತಸಂದೋಹ ಬಹುವಾಗಿಯೇ ಇತ್ತು. ಅವರ ಕಾಲವಿನಿಯೋಗಕ್ಕೆ ತಕ್ಕ ಉದ್ಯೋಗವೂ ಸಿದ್ಧವಾಗಿತ್ತು. ಅಲೆಗ್ಸಾಂಡ್ರಿಯದ ಬೃಹತ್ ಗ್ರಂಥಾಲಯದ ವಿದ್ವಾಂಸರೂ ಇತರರೂ ದಿಟವಾಗಿ ಲೋಕೋಪಯುಕ್ತವಾದ ಜವಾಬ್ದಾರಿ ಕೆಲಸವನ್ನೇ ಮಾಡಿ ಕೃತಕೃತ್ಯರಾದರು. ಹಿಂದಣ ಗ್ರಂಥಗಳ ಪಾಠನಿರ್ಣಯ, ಟೀಕು ಟಿಪ್ಪಣೆ ವ್ಯಾಖ್ಯಾನಗಳ ರಚನೆ, ವ್ಯಾಕರಣ ಅಲಂಕಾರ ಶಾಸ್ತ್ರಗಳ ಸುವ್ಯವಸ್ಥೆ ನಾನಾ ವಿಧದ ವರ್ಗೀಕರಣ-ಎಲ್ಲವನ್ನೂ ಅತ್ಯಂತ ಶ್ರದ್ಧೆಯಿಂದ ಅವರು ಮಾಡಿದರು. ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೆ ಬಿಡದೆ ಅಂಟಿಕೊಂಡಿರುವ ವಿವಾದಗ್ರಸ್ತ ಪ್ರಶ್ನೆಗಳ ಕೂಲಂಕಷ ಚರ್ಚೆಯೂ ಅವರಿಂದ ಆಯಿತು. ಕಾವ್ಯದಲ್ಲಿ ಮುಖ್ಯಸ್ಥಾನ ವಿಷಯಕ್ಕೋ ವಿಷಯ ನಿರೂಪಣರೀತಿಗೋ? ಶಿಷ್ಟ ಶೈಲಿಗೂ ಆಡಂಬರ ಶೈಲಿಗೂ ಇರುವ ವ್ಯತ್ಯಾಸವೇನು? ಎರಡಕ್ಕೂ ನಡುವಣ ಮಧ್ಯಶೈಲಿ ಎಂಬುದಿಲ್ಲವೇ? ಕಾವ್ಯ ಬೋಧಪ್ರದವಾಗಿರಬೇಕೊ ಆಹ್ಲಾದಕರವಾಗಿರಬೇಕೊ? ಯಾವುದು ಪ್ರಮಾಣಸಾಹಿತ್ಯ? ಅದರ ಅಧಿಕಾರವಿಧಿಗಳಿಗೆ ಮಣಿಯುವುದು ಒಳ್ಳೆಯದೊ ಮಣಿಯದೆ ಕವಿ ತನ್ನತನವನ್ನು ಪ್ರಕಟಿಸುವುದು ಒಳ್ಳೆಯದೊ? ಕಾವ್ಯ ಹೆಚ್ಚೊ ತತ್ತ್ವಶಾಸ್ತ್ರ ಹೆಚ್ಚೋ? ಪದ್ಯದ ಛಂದಸ್ಸಿಗೂ ಗದ್ಯದ ಲಯಕ್ಕೂ ಸಾಮ್ಯವುಂಟೆ? ಇಂಥ ಸಮಸ್ಯೆಗಳನ್ನು ವಿದ್ವಜ್ಜನರು ಬರೀ ವಿನೋದಕ್ಕಾಗಿ ಅಲ್ಲ, ಶಾಸ್ತ್ರೀಯ ಪರಾಮರ್ಶೆಗಾಗಿ ಎತ್ತಿಕೊಂಡರು. ವಿಮರ್ಶಾ ಪ್ರಬಂಧಗಳು ಪುಷ್ಕಳವಾಗಿ ಹುಟ್ಟಿದುವು. ಆದರೆ ಎಲ್ಲೊ ಕೆಲವು ಚೂರುಪಾರನ್ನು ಬಿಟ್ಟರೆ ಮಿಕ್ಕಿದ್ದೇನೂ ಉಪಲಬ್ಧವಾಗಿಲ್ಲದಿರುವುದು ವಿಷಾದಕರ. ವಾಗ್ಮಿಕಲೆ ಅವರ ಪ್ರಯತ್ನದ ಫಲವಾಗಿ ಒಂದು ಪರಿಷ್ಕಾರವಾದ ಶಾಸ್ತ್ರವಾಯಿತು. ಪಾರಿಭಾಷಿಕ ಪದಗಳ ಸಂಖ್ಯೆ ಹುಲುಸಾಗಿ ಬೆಳೆಯಿತು. ಪ್ರಾಸದ ನಾನಾ ಬಗೆಗೂ ಪುನರುಕ್ತಿ ಅಲಂಕಾರದ ನಾನಾವಿಧಕ್ಕೂ ಬೇರೆಬೇರೆ ಹೆಸರು ಬಂತು. ಹಾಗೆಯೇ ಸಾಹಿತ್ಯಕ್ಕೂ ಅದರ ವಿಮರ್ಶೆಗೂ ಸಂಬಂಧಪಡದೆ ಬರೀ ಕುತೂಹಲ ಕೆರಳಿಸುವ ವಿಚಿತ್ರ ವಿಚಾರಗಳ ಚರ್ಚೆ ಸಂತತವಾಗಿ ನಡೆಯಿತು. ಪೆನಿಲಪಿ ಸಹಾಯ ಕೋರಿ ತನ್ನ ತಂದೆಗೆ ಏತಕ್ಕೆ ಹೇಳಿಕಳಿಸಲಿಲ್ಲ, ಮೆನಿಸನ ಬಳಿಗೆ ಏತಕ್ಕೆ ಮಗನನ್ನು ಕಳಿಸಿದಳು? ಮನುಷ್ಯರು ಊಟಕ್ಕೆ ಮುನ್ನ ಕೈತೊಳೆದುಕೊಳ್ಳುತ್ತಾರೆ, ದೇವತೆಗಳು ಏತಕ್ಕೆ ಹಾಗೆ ಮಾಡುವುದಿಲ್ಲ? ಇಂಥ ಕೆಲವು ಅಸಂಗತ ಟೀಕೆಗಳನ್ನೆತ್ತಿಕೊಂಡು ಹೋಮರ್ ಕವಿಯನ್ನು ವಿಮರ್ಶಿಸಿದೆವೆಂದು ಕೊಂಡರು.

  	ಅಲೆಗ್ಸಾಂಡರ್‍ನ ಅವಧಿ ಮುಗಿದ ತರುವಾಯ ಗ್ರೀಕ್ ರಾಷ್ಟ್ರಗಳು ರೋಮನ್ ಚಕ್ರಾಧಿಪತ್ಯಕ್ಕೆ ಅಧೀನವಾದವು. ರೋಮನರಿಗಾದರೊ ಗ್ರೀಕ್ ಭಾಷೆ ಸಾಹಿತ್ಯ ಸಂಸ್ಕøತಿಗಳನ್ನು ಕಂಡು ಆಶ್ಚರ್ಯಗೂಡಿದ ಪ್ರೀತಿ. ಆದ್ದರಿಂದ ಅವೆಲ್ಲವನ್ನೂ ಉಲ್ಲಾಸದಿಂದ ಅವರು ತಮ್ಮದನ್ನಾಗಿಸಿಕೊಂಡರು. ಕೊನೆಗೆ ಗ್ರೀಕರ ದೇವವರ್ಗವೇ ಹೆಸರು ಬದಲಾಯಿಸಿಕೊಂಡು ರೋಮನರದಾಯಿತು. ಹಲವು ಗ್ರೀಕ್ ವಿದ್ವಾಂಸರು ರೋಮನರಿಂದ ಮನ್ನಣೆಯನ್ನೂ ಸಂಭಾವನೆಯನ್ನೂ ಪಡೆದುಕೊಂಡರು. ಸೃಜನಕಾವ್ಯ ಕ್ಷೇತ್ರದಲ್ಲಿ ಒಂದು ಬಗೆಯ ಗದ್ಯಕಥೆ, ಕಲ್ಪನೆ ವಾಸ್ತವತೆ ಎರಡೂ ಸೇರಿಕೊಂಡ ಜೀವನಚರಿತ್ರೆ-ಎರಡೇ ನೂತನವಾಗಿ ಎದ್ದು ಬಂದ, ಸಾಹಿತ್ಯಪ್ರಕಾರಗಳು. ಆ ಕಾಲದ ಗ್ರೀಕರಿಗೆ ಕ್ರಿ.ಪೂ. 8ರಿಂದ 5ನೆಯ ಶತಮಾನದ ವರೆಗಿನ ಗ್ರೀಕ್ ಕಾವ್ಯ ಪ್ರಾಚೀನವಾಗಿಯೇ ತೋರಿಬಂದು, ಅದರ ವಿಚಾರದಲ್ಲಿ ಅವರ ಭಕ್ತಿ ಶ್ರದ್ಧೆಯನ್ನು ಕುದುರಿಸಿತು. ಅದನ್ನು ಪಠಿಸಿ ಅದರಿಂದ ಸ್ಫೂರ್ತಿ ಪಡೆದು ಅದರ ಮಾದರಿಯನ್ನು ಅನುಕರಿಸುವುದೇ ಅರ್ವಾಚೀನ ಕವಿಗೆ ಶ್ರೇಯಸ್ಸಿನ ಮಾರ್ಗವೆಂದು ಅವರು ಮನಗಂಡರು. ಅಲ್ಲಿ ಇಲ್ಲಿ ದೂರ ದೂರ ಅವರು ಇದ್ದುದರಿಂದ ಯಾವೊಂದು ಸಾಹಿತ್ಯಕೂಟ ಏರ್ಪಡಿಸಿಕೊಳ್ಳುವುದಕ್ಕೂ ಅವರಿಗೆ ಸಾಧ್ಯವಾಗಲಿಲ್ಲ. ಆದರೂ ಉಚ್ಚಮಟ್ಟದ ವಿಮರ್ಶೆಯೂ ಸಾಹಿತ್ಯ ವ್ಯಾಖ್ಯಾನವೂ ಅವರಿಂದ ಆಯಿತು : 1 ಪ್ರಾಚೀನ ಸಾಹಿತ್ಯದ ಸಕ್ರಮ ವಿಂಗಡಣೆ, ಅದರ ಅಧ್ಯಯನಕ್ಕೆ ಬೇಕಾದ ನಿರ್ದಿಷ್ಟ ರೀತಿನೀತಿಯ ರೂಪುರೇಖೆ ; 2 ಭಾವಗೀತೆ ಮತ್ತು ಪ್ರಗಾಥಗಳಿಗೆ ಯೋಗ್ಯ ಮರ್ಯಾದೆ (ಆರ್ಕಿಲೋಕಸ್ ಸ್ಯಾಫೊ ಆಲ್ಕಿಯಸ್ ಮೊದಲಾದ ದೊಡ್ಡ ಕವಿಗಳನ್ನು ಪ್ಲೇಟೊ ಆರಿಸ್ಟಾಟಲ್ ಕೂಡ ನಿರ್ಲಕ್ಷಿಸಿದ್ದರು); 3 ಪದ್ಯವಾಗಲಿ ಗದ್ಯವಾಗಲಿ ಭಾವಾತ್ಮಕವಾಗಿದ್ದರೇ ಅದು (ಕಾವ್ಯ-ಎಂಬ) ನಿಜಾಂಶದ ಗ್ರಹಿಕೆ; 4 ಆಟ್ಟಿಕ್-ಏಷ್ಯನ್ ವಿವಾದದ ಸಮಜಾಯಿಷಿ; ಒಂದರ ಸೆಣಕತಲುತನಕ್ಕೂ ಇನ್ನೊಂದರ ಬೊಜ್ಜಿಗೂ ಮಧ್ಯವಾದ ಸೂಕ್ತ ಮಾಂಸಲಶೈಲಿ ಉಂಟೆಂದು ಘೋಷಣೆ; 5 ಕಾವ್ಯಕ್ಕೆ ಸತ್ತ್ವವನ್ನೂ ಸೌಂದರ್ರ್ಯವನ್ನೂ ಎರೆಯುವ ಯಾವುದೊ ಕವಿಶಕ್ತಿ ಆಯ್ದು ಕವಿಗಳಿಗೆ ದತ್ತವಾಗಿದೆ, ಅದರ ಮೂಲವನ್ನೂ ಕಾರ್ಯವಿಧನವನ್ನೂ ಬುದ್ಧಿಬಲದಿಂದ ಕಂಡುಹಿಡಿಯಲಾಗುವುದಿಲ್ಲ (ಇದೊಂದು ಅಮೂಲ್ಯ ಅಭಿಪ್ರಾಯ).

  	ಆ ಕಾಲದ ಕೆಲವು ವಿಮರ್ಶಕರ ಒಪ್ಪತಕ್ಕ ಸೂಕ್ತಗಳನ್ನು ಇಲ್ಲಿ ಉದಾಹರಿಸಿದೆ: ಹ್ಯಲಿಕಾರ್ನಸಸ್ಸಿನ ಡಯೊನೀಸಸ್ ; `ಶುದ್ಧವೂ ಸ್ವಾಭಾವಿಕವೂ ಆದ ಶಬ್ದಗಳನ್ನು ಆರಿಸಿಕೊಂಡು ಅವನ್ನು ಘನತೆ ಇಂಪು ಎರಡೂ ಕೂಡಿಬರುವಂತೆ ಪೋಣಿಸತಕ್ಕದ್ದು, ಒಟ್ಟಿನಲ್ಲಿ ರಮ್ಯತೆ ಹುಟ್ಟುವುದು ಎಲ್ಲ ಬಿಡಿ ಅಂಶಗಳ ಬಿಡಿ ರಮ್ಯತೆಯಿಂದ. ಲಯಬದ್ಧವಾಕ್ಯಕ್ಕೆ ವಿವಿಧ ತೆರನುಂಟು ; ಎಲ್ಲವನ್ನೂ ಬಳಸಿಕೊಂಡು ಸಮಷ್ಟಿಲಾವಣ್ಯವನ್ನು ಉತ್ಪತ್ತಿ ಮಾಡಬೇಕು, ವೈವಿಧ್ಯವನ್ನೇ ಕಾಣದ ಬರವಣಿಗೆ ನೀರಸ, ಫಿಲೊಸ್ಟ್ರಾಟಸ್ ; `ಅನುಕರಣೆಗಿಂತ ವಿಭಾವನೆ ಹೆಚ್ಚು ಜಾಣೆ; ಕಂಡದ್ದನ್ನು ಮಾತ್ರ ಅವಳು ಬಣ್ಣಿಸಬಲ್ಲಳು. ಇವಳಾದರೊ ಕಣ್ಣಿಗೆ ಕಾಣದ್ದನ್ನು ಕಂಡದ್ದನ್ನು ಹೋಲಿಕೆಯ ಮೇಲೆ, ಬಣ್ಣಿಸಬಲ್ಲಳು, ಲ್ಯೂಸಿಯನ್; ` ನೀನು ಸಾಹಿತಿ ಎನ್ನಿಸಿಕೊಳ್ಳಬೇಕೆ ? ಆಧುನಿಕ ಕುತಾರ್ಕಿಕರ ಕೆಟ್ಟ ಯುಕ್ತಿಗಳನ್ನು ಬಳಸದಿರು ; ಅವರ ಕೃತಕ ನಾಜೂಕಿಗೆ ಒಲಿಯಬೇಡ. ಅಂದಚಂದವನ್ನೂ ಸುಸ್ಪಷ್ಟತೆಯನ್ನೂ ಆರಾಧಿಸು. ಅರ್ಥವನ್ನು ಮೊದಲು ನೆನೆದು ಆಮೇಲೆ ಉಚಿತ ಪದಗಳನ್ನು ಕಂಡುಹಿಡಿ; ವಿಜಾತೀಯ ಪದದಿಂದ ಮೋಹಿತನಾಗಿ ಅದಕ್ಕೆ ತಕ್ಕ ಅರ್ಥವನ್ನು ಹೊಂದಿಸಹೋಗಬೇಡ.

	ಕ್ರಿ.ಶ. 3ನೆಯ ಶತಮಾನದ ಲಾಂಜೈನಸ್ ನಿಜವಾಗಿ ಮೇಲ್ಮಟ್ಟದ ವಿಮರ್ಶಕ. ಆರಿಸ್ಟಾಟಲ್ ಒಬ್ಬನೇ ಅವನನ್ನು ಮೀರಿಸಿದಾತ. ಅವನ ಕೃತಿ ಚಿಕ್ಕದು; ಅದನ್ನು `ಮಹೋನ್ನತಿಯನ್ನು ಕುರಿತು` ಎಂದು ಕರೆಯುವುದು ರೂಢಿ. ಸರಿಸುಮಾರಾಗಿ ಅದರ ಪ್ರತಿಯೊಂದು ವಾಕ್ಯವೂ ಎಲ್ಲ ಕಾಲದ ಶ್ರೇಷ್ಠ ಸಾಹಿತ್ಯಕ್ಕೂ ಸರಿಯಾಗಿ ಅನ್ವಯಿಸಬಲ್ಲ ಅರ್ಥಪುಷ್ಪವಾದ ಹೇಳಿಕೆ. ಸಾರಸ್ವತ ವಿಷಯಗಳ ಆಳಕ್ಕೆ ಇಳಿದು ಶಾಶ್ವತ ತತ್ತ್ವಗಳನ್ನು ಕಂಡುಕೊಳ್ಳುವುದರಲ್ಲಿ ಅವನು ನಿಸ್ಸೀಮ. ಇವು ಅವನ ಕೆಲವು ಅಣಿಮುತ್ತುಗಳು: ಪದಗುಚ್ಛಗಳ ಸರ್ವೋತ್ಕøಷ್ಟತೆ ಮತ್ತು ಪರಿಪೂರ್ಣ ಹೊಂದಾಣಿಕೆಯೇ ಮಹೋನ್ನತಿ. ಆ ಗುಟ್ಟನ್ನು ಉದ್ಘ ಕವಿಗಳು ಅರಿತಿದ್ದಾರೆ. ಯಾವುದು ಅಸಾಮಾನ್ಯವೊ ಅದು ಶ್ರೋತೃಗಳನ್ನು ಬರಿ ಮನವೊಪ್ಪಿಸಿ ಸುಮ್ಮನಾಗದು. ಆನಂದ ಪರವಶತೆಗೆ ಅವರನ್ನು ಒಯ್ಯುತ್ತದೆ. ಕಾವ್ಯರಚನೆಯಲ್ಲಿ ಪ್ರಕೃತಿಯ ಭಾಗವೆಷ್ಟು, ನಿಯಮಾವಳಿಯ ಭಾಗವೆಷ್ಟು ಎಂಬ ಪ್ರಶ್ನೆಗಳಿಗೆ ಅವನ ಉತ್ತರ-ಪ್ರಕೃತಿಯಿಂದ ದ್ರವ್ಯಗಳ ಸರಬರಾಜು, ನಿಯಮಾವಳಿಯಿಂದ ಅವುಗಳ ಒಪ್ಪಓರಣ. ಭಾವೋದ್ರೇಕದ ವಾಗ್ಮಿತೆಯನ್ನು ಮತ್ತಾವುದೂ ಸರಿಗಟ್ಟದು. ಉಚಿತ ಜಾಗದಲ್ಲಿ ಅದು ಬಂದರೆ ಅದರ ಉನ್ಮಾದಾವೇಶ ಉಕ್ತಿಯಲ್ಲಿ ತುಂಬಿಕೊಂಡು ದೈವಪ್ರೇರಣೆಯ ಕಣಿವಚನದಂತಾಗುತ್ತದೆ. ಆಡಿಸಿ ಕಾವ್ಯದಲ್ಲಿ ಹೋಮರ್ ಸಂಜೆಯ ಸೂರ್ಯನಾಗಿದ್ದಾನೆ; ಮಹತ್ತ್ವವುಂಟು, ಆದರೆ ಕಾವು ಕುಂದಿ ಹೋಗಿದೆ. ಮುಪ್ಪಿನ ವಿಚಾರ ನಾನು ಪ್ರಸ್ತಾವಿಸುತ್ತಿರುವುದು. ಆದರೆ ಅದು ಹೋಮರನ ಮುಪ್ಪು. ಅಲಂಕಾರವೆಂದು ತೋರದಿರುವುದೇ ಉತ್ತಮ ಕಾವ್ಯಾಲಂಕಾರ. ಸುಂದರ ಶಬ್ದಗಳು ಮನಸ್ಸಿನ ನೈಜ ವಿಶಿಷ್ಟ ಪ್ರಭೆ. ಯಾರ ಮನೋಧರ್ಮ ಅತಿ ಶ್ರೇಷ್ಠವೊ ಅವರಲ್ಲಿ ದೋಷರಾಹಿತ್ಯ ಕಡಿಮೆ. ಮಹೋನ್ನತಿ ಅದರ ಲೇಖಕರನ್ನು ಭಗವಂತನ ಸರ್ವಶಕ್ತಚಿತ್ತದ ಹತ್ತಿರಕ್ಕೆ ಕೊಂಡೊಯ್ಯುತ್ತದೆ. ಸಾಹಿತ್ಯದ ಮೇಲೆ ಸರಿಯಾದ ತೀರ್ಪನ್ನೀಯುವುದು ಬಲು ಪ್ರಯತ್ನದ ಕೊನೆಯಲ್ಲಿ ಎದ್ದು ಬರುವ ಬೆಳೆ.

	 ಬೇಕಾದಷ್ಟು ತಕ್ಕ ನಿದರ್ಶನವನ್ನು ಕೊಡದೆ ಲಾಂಜೈನಸ್ ಒಂದು ಕಡೆಯೂ ಮಾತಾಡಿಲ್ಲ; ಅದೂ ಅವನ ಒಂದು ಹಿರಿಮೆ.
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ